ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ,ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿ ಪಥದತ್ತ ಸಾಗುತ್ತಿದೆ. ಈ ಜೀಣೋದ್ಧಾರ ಕಾರ್ಯಕ್ಕೆ ಅನುದಾನದ ರೂಪದಲ್ಲಿ 1 ಕೋಟಿ ರೂ. ನೀಡುತ್ತೇನೆ ಎಂದು ಈ ಹಿಂದೆ ಈಗಾಗಲೇ ವಾಗ್ದಾನ ಮಾಡಿದ್ದೆ. ಈ ಪವಿತ್ರವಾದ ಕಾರ್ಯಕ್ಕೆ ಮತ್ತೆ 1 ಕೋಟಿ ರೂ. ಅನುದಾನ ನೀಡುವದಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು. ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶನಿವಾರ ರಾತ್ರಿ ಶ್ರೀ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆಯ ಅಂಗವಾಗಿ ನಡೆದ ಪುರಾಣ ಮಂಗಲ ಕಾಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ, ನಾವೆಲ್ಲರು ಇಂದು ಶಾಂತಿಯಿಂದ ಬದುಕಲು ಕಾರಣ ಈ ಮಠದ ಪರಂಪರೆ, ಈ ಮಠದ ಪರಂಪರೆ ರಕ್ಷಣೆಗೆ ನನ್ನ ಜೀವನವನ್ನೆ ಮೀಸಲಾಗಿ ಇಡುತ್ತೇನೆ. ಈ ಕ್ಷೇತ್ರದಲ್ಲಿ ಬಿಎಡ್ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗ ಶ್ರಮಿಸುತ್ತೇನೆ ಎಂದರು. ಇಂಥಹ ಮಠದ ಪೀಠಾಧೀಶರಾಗಿದ್ದ ಬಂಥನಾಳದ ಪೂಜ್ಯ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈ ಭಾಗದಲ್ಲಿ ವಿದ್ಯುತ್, ರಸ್ತೆ , ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಪ್ರವಚನ ಕೇಳಿದ ಭಕ್ತರು ಜೋಳಿಗೆಗೆ ಹಾಕಿದ ಹಣದಲ್ಲಿ ಬಿಎಲ್ಡಿಇ ಸಂಸ್ಥೆಯ ವತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಇಂಥ ಪೂಜ್ಯರ ಜೀವನ ಚರಿತ್ರೆ ಕುರಿತು ಲಚ್ಯಾಣ ಮಠದಲ್ಲಿ ಪುರಾಣ ಕಾಯಕ್ರಮ ಆಯೋಜಿಸಿದ್ದು ಸಂತೋಷ ಮೂಡಿಸಿದೆ ಎಂದರು.

ಈ ಕಾರ್ಯಕ್ರಮದ ಸಾನಿಧ್ಯವಹಿಸಿದ ಯರನಾಳದ ಗುರುಸಂಗನಬಸವ ಮಹಾಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆಯ ಸಂದಭದಲ್ಲಿ ಮಳೆಯ ಸಿಂಚನ ಆಗುತ್ತಿರುವದು ಸಂತಸದ ಭಾವ ಮೂಡಿಸಿದೆ. ಈ ಹಿಂದೆ ನಾನು ಇಲ್ಲಿ ಪ್ರವಚನ ಹೇಳಲು ಬಂದ ಸಂದಭದಲ್ಲಿ ಭಾರಿ ಪ್ರಮಾಣದ ಮಳೆ ಆಗಿತ್ತು ಎಂದು ನೆನಪಿಸಿದರು. ಈ ಕ್ಷೇತ್ರದಲ್ಲಿ ಮಾಣಿಕ್ಯ ರೂಪದಲ್ಲಿ ಬಂದು ನಿಂತವರು ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಎಂದರು.

ತುಂಗಳದ ಶಿವಶರಣಿ ಅನಸೂಯಾದೇವಿ ಅಮ್ಮನವರು ಮಾತನಾಡಿ, ಪರಮಾತ್ಮ ಯಾವ ರೂಪದಲ್ಲಿ ಬರುತ್ತಾನೆ ಎಂದು ಹೇಳಲು ಆಗದು. ಸಾಕ್ಷಾತ ಪರಮಾತ್ಮನೆ ಸಿದ್ಧಲಿಂಗನ ರೂಪದಲ್ಲಿ ಬಂದಿದ್ದಾನೆ. ಗುರುಮಹಾತ್ಮನೇ ಪರಮಾತ್ಮ ಎಂದರು.
ಹುಣಶ್ಯಾಳ ಪಿ.ಬಿ.ಯ ನಿಜಗುಣದೇವರು ಮಾತನಾಡಿ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ತಾಕತ್ತು ಬಹಳ ದೊಡ್ಡದು. ಲಚ್ಯಾಣದಲ್ಲಿ ಇಂಥಹ ಪುಣ್ಯ ಕಾರ್ಯಕ್ಕಾಗಿ ಬೀಜ ಬಿತ್ತನೆ ಮಾಡಿ ಗೊಬ್ಬರ ಹಾಕುವ ಕೆಲಸ ಮಾಡಿದರೆ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈ ಕ್ಷೇತ್ರವನ್ನು ಹೆಮ್ಮರವಾಗಿ ಮಾಡಿದರು ಎಂದು ಸ್ಮರಿಸಿದರು.
ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟವನ್ನು ಮೂಲವಾಗಿ ಇಟ್ಟುಕೊಂಡು, ಶಿಕ್ಷಣದ ಮೂಲಕ ಈ ರಾಷ್ಟ್ರವನ್ನು ಕಟ್ಟಿದವರು ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು. ದೇಶದ ಸ್ವಾತಂತ್ರ್ಯದ ಪೂರ್ವದಲ್ಲಿ ನೀರಿಲ್ಲದ ಊರಿಗೆ ನೀರು, ರಸ್ತೆ ಇಲ್ಲದ ಊರಿಗೆ ರಸ್ತೆ ಸೌಲಭ್ಯ ಕಲ್ಪಿಸಿ ಸ್ವಾಮಿತ್ವದ ನಿಜವಾದ ಸೇವೆ ಮಾಡಿದರು ಎಂದು ವಿವರಿಸದರು. ವೇದಿಕೆಯ ಮೇಲೆ ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ, ಗವಾಯಿಗಳಾದ ಕಲ್ಲೂರಿನ ಶಂಕರಯ್ಯ ಆರ್. ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ, ವಯೋಲಿನ್ ಕಲಾವಿದ ಗೂಗವಾಡದ ಕೃಷ್ಣಾ ಅಂದಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಹಳಿಂಗಳಿಯ ಪೂಜ್ಯರು, ಜಕನೂರಿನ ಸಿದ್ಧಲಿಂಗದೇವರು, ಅಗರಖೇಡದ ಅಭಿನವ ಪ್ರಭುಲಿಂಗ ಸ್ವಾಮೀಜಿ, ಮದರಖಂಡಿ ಬಸವಯ್ಯ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ, ಆತ್ಮಾನಂದ ಮಹಾಸ್ವಾಮೀಜಿ ಕಾಯಕ್ರಮದ ಸಾನಿಧ್ಯವಹಿಸಿದ್ದರು.
ನಿವೃತ್ತ ಪ್ರಾಚಾಯ ಎ.ಪಿ. ಕಾಗವಾಡ ಸ್ವಾಗತಿಸಿದರು. ಅರಣ್ಯ ಅಧಿಕಾರಿ ಡಿ.ಎ. ಮುಜಗೊಂಡ ಕಾಯಕ್ರಮ ನಿರೂಪಿಸಿ ವಂದಿಸಿದರು.


Recent Comments