ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸರು ದ್ವಿಚಕ್ರ ವಾಹನ ಕಳ್ಳರ ಜಾಲವನ್ನು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 12 ಕಳ್ಳತನದ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ 8.15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಹಾರೂಗೇರಿ ಗ್ರಾಮದ ನಿವಾಸಿ ಅಮ್ಮದ್ ಖಾನ್ ಮುಜಾವರ ಅವರು ಸೆಪ್ಟೆಂಬರ್ 12, 2025 ರಂದು ಹಾರೂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ಹಿರೋ ಸ್ಟ್ಯಾಂಡರ್ಡ್ ಪ್ಲಸ್ ಬೈಕನ್ನು ಜೂನ್ 3, 2025 ರಂದು ರಾತ್ರಿ 8 ರಿಂದ 9 ಗಂಟೆಯ ನಡುವೆ ಹಾರೂಗೇರಿಯ ಯಾರಟ್ಟಿ ರಸ್ತೆಯಲ್ಲಿ ಕಳ್ಳತನ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿದ್ದರು.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ ಗುಳೇದ ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಮುನ್ನೋಳ್ಳಿ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಯಿತು. ಹಾರೂಗೇರಿ ವೃತ್ತದ ಸಿಪಿಐ ರತನಕುಮಾರ ಜೀರಗ್ಯಾಳ ಅವರ ಮೇಲ್ವಿಚಾರಣೆಯಲ್ಲಿ, ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಮಾಳಪ್ಪ ಪೂಜಾರಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಈ ತಂಡದಲ್ಲಿ ಅಶೋಕ. ಶಾಂಡಗೆ, ರಮೇಶ ಮುಂದಿನಮನಿ, ಬಸವರಾಜ ಹೊಸಟ್ಟಿ, ಹಣಮಂತ ಆರ್. ಅಂಬಿ, ಜಿ.ಎನ್. ಕಾಗವಾಡ, ಪ್ರಕಾಶ ಸಪ್ತಸಾಗರೆ, ಸುರೇಶ ಹೂಗಾರ, ಮತ್ತು ಬೆಳಗಾವಿ ಪೊಲೀಸ್ ಅಧೀಕ್ಷಕರ ಕಚೇರಿಯ ವಿನೋದ ಠಕ್ಕನ್ನವರ (ಟೆಕ್ನಿಕಲ್ ಸೇಲ್) ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ತನಿಖೆಯ ಸಂದರ್ಭದಲ್ಲಿ, ಈ ತಂಡವು ತಾಂತ್ರಿಕ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅವರ ವಿಚಾರಣೆ ವೇಳೆ ಒಟ್ಟು 12 ಮೋಟಾರ್ ಸೈಕಲ್ಗಳ ಕಳ್ಳತನದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಎಲ್ಲ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖಾ ತಂಡದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.



Recent Comments